ರಾವಲ್ಪಿಂಡಿ
ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಒಂದು ವಿಭಾಗ. ಒಂದು ಜಿಲ್ಲೆ ಮತ್ತು ಇವುಗಳ ಆಡಳಿತ ಕೇಂದ್ರ ನಗರ. ರಾಜಧಾನಿ ಇಸ್ಲಮಾಬಾದ್‍ನ ದಕ್ಷಿಣಕ್ಕೆ 14 ಕಿಮೀ ದೂರದಲ್ಲಿದೆ. ಪಾಕಿಸ್ತಾನದ ಈಶಾನ್ಯದಲ್ಲಿ ಪಾಟ್‍ವಾರ್ ಪ್ರಸ್ಥಭೂಮಿಗೆ ಸೇರಿದ ರಾವಲ್ಪಿಂಡಿ ನಗರ ಸು. 530 ಮೀ ಎತ್ತರದಲ್ಲಿದೆ.  1972ರಲ್ಲಿ ಸು. 6,15000 ಜನಸಂಖ್ಯೆಯಿದ್ದ ಈ ನಗರ ಇಂದು ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆಯಲ್ಲಿ ಮೂರುಪಟ್ಟು ಹೆಚ್ಚು ಬೆಳೆದಿದೆ.  ಪಾಕಿಸ್ತಾನದ ಒಂದು ಪ್ರಮುಖ ಸೈನ್ಯನೆಲೆಯಾದ ಈ ನಗರವನ್ನು ದಂಡುಪ್ರದೇಶದಿಂದ ಮಧ್ಯದಲ್ಲಿ ಹರಿವ ಒಂದು ನಾಲೆ  ಬೇರ್ಪಡಿಸಿದೆ.  ಮುರ್ರಿ ರಸ್ತೆಯಲ್ಲಿ ಒಂದು ಉಪನಗರವನ್ನು ಕಟ್ಟಲಾಗಿದೆ.  1959 ರಿಂದ 1969ರವರೆಗೆ ಪಾಕಿಸ್ತಾನದ ರಾಜಧಾನಿಯಾಗಿದ್ದ ಈ ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ  ಲಾಹೋರಿನ ವಾಯುವ್ಯಕ್ಕೆ 288 ಕಿಮೀ ದೂರದಲ್ಲೂ ಇದೆ. ರೈಲು ರಸ್ತೆ ಹಾಗೂ ವಿಮಾನ ಸಂಪರ್ಕವಿರುವ ಈ ನಗರ ಒಂದು ಮುಖ್ಯ ಕೈಗಾರಿಕೆ ಮತ್ತು ವ್ಯಾಪಾರ ವಾಣಿಜ್ಯ ಕೇಂದ್ರ. ರೈಲು ಕಾರ್ಖಾನೆ, ಇಂಧನ, ತೈಲಶೋಧನಾಗಾರ, ಮರಕೊಯ್ಯುವ ಕಾರ್ಖಾನೆ,  ಕಬ್ಬಿಣ, ಹತ್ತಿ, ಬಟ್ಟೆನೇಯ್ಗೆ, ಪಾನೀಯ ತಯಾರಿಕೆ ಹಾಗೂ ಪಾದರಕ್ಷೆ ಮತ್ತು ವಿವಿಧ ಚರ್ಮವಸ್ತುಗಳು, ಮಣ್ಣಿನ ಪಾತ್ರೆಗಳು, ಕಾಗದ ಮತ್ತು ಗುಡಾರದ ವಸ್ತುಗಳ ತಯಾರಿಕಾ ಕಾರ್ಖಾನೆಗಳಿವೆ. ಪ್ರತಿ ವರ್ಷ ಕುದುರೆಗಳ ಪ್ರದರ್ಶನಜಾತ್ರೆ ನಡೆಯುವುದು. ಪ್ರಸಿದ್ಧ ಆಯೂಬ್ ರಾಷ್ಟ್ರೀಯ ಉದ್ಯಾನವನ, ಲಿಯಾಖತ್ ತೋಟಗಳು, ಪೊಲೀಸ್ ತರಬೇತಿ ಕೇಂದ್ರ, ವಿವಿಧ ಕೈಗಾರಿಕಾ ತರಬೇತಿ ಕೇಂದ್ರ, ಶಸ್ತ್ರಾಸ್ತ್ರಪಡೆಯ ವೈದ್ಯಕೀಯ ಕಾಲೇಜು, ಪಾಕಿಸ್ತಾನದ ಶಸ್ತ್ರಾಸ್ತ್ರಪಡೆಯ ಮುಖ್ಯ ಕೇಂದ್ರ ಕಛೇರಿ ಮುಂತಾದವು ಇಲ್ಲಿವೆ. ರಾವಲ್ಪಿಂಡಿ 1965ರಿಂದ ದೂರದರ್ಶನದ ಒಂದು ಮುಖ್ಯ ಪ್ರಸಾರ ಕೇಂದ್ರವಾಗಿದೆ. ಕರಾಚಿ, ಲಾಹೋರ್, ರಾವಲ್ಪಿಂಡಿ  ನಡುವೆ ಟೆಲಿಪ್ರಿಂಟರ್ ಮುಂತಾದ ವ್ಯವಸ್ಥೆಯಿದೆ.
ರಾವಲರೆಂಬ ಯೋಗಿಗಳಿದ್ದ ಒಂದು ಹಳ್ಳಿಯೇ ರಾವಲ್ಪಿಂಡಿ ಎಂಬ ಹೆಸರಿನಿಂದ ಬೆಳೆಯಿತೆಂದು ಐತಿಹ್ಯ. ಈ ನಗರದ ಹತ್ತಿರವೇ 14ನೆಯ ಶತಮಾನದಲ್ಲಿ ಮುಂಗೋಲರ ಧಾಳಿಯಿಂದಾಗಿ ನಾಶವಾದ ಭಟ್ಟಿ ಜನಾಂಗದ ರಾಜಧಾನಿಯಾಗಿದ್ದ ಗಾಜಿಪುರ್ ಅಥವಾ ಘಜ್ನಿಪುರದ ಅವಶೇಷಗಳು ದೊರಕಿವೆ. ಮುಂದೆ ಘಕಾರ್ ಮುಖಂಡ ಝಂಡಾಖಾನ್ ಎಂಬಾತ ಮತ್ತೆ ಊರನ್ನೂ ಸ್ಥಾಪಿಸಿ ಅದಕ್ಕೆ ಇಂದಿನ ಹೆಸರನ್ನು ಕೊಟ್ಟನಂತೆ.  1765ರಲ್ಲಿ ಮಿಲ್ಕಾಸಿಂಸ್ ಎಂಬ ಸಾಹಸಿ ಈ ಊರನ್ನು ತನ್ನ ವಶಮಾಡಿಕೊಂಡು ಝೀಲಂ ಮತ್ತು ಶಹಪುರ ಜಿಲ್ಲೆಗಳಿಂದ ಬಂದವರು ಅಲ್ಲಿ ನೆಲೆಸುವಂತೆ ಮಾಡಿದ್ದರಿಂದ ಊರು ಶೀಘ್ರವಾಗಿ ಬೆಳೆಯಿತು.  1849ರಲ್ಲಿ ಈ ಊರನ್ನು ಬ್ರಿಟಿಷರು ತಮ್ಮ ವಶಪಡಿಸಿಕೊಂಡರು.  1919ರಲ್ಲಿ ಮೂರನೆಯ ಆಫ್‍ಘನ್ ಯುದ್ಧ ಕೊನೆಗೊಂಡು ಬ್ರಿಟಿಷ್ ಮತ್ತು ಆಫ್‍ಘನ್ ಪ್ರತಿನಿಧಿಗಳು ಈ ಊರಿನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿಮಾಡಿದರು.  ಮುಂದೆ ಈ ಊರು ಪಾಕಿಸ್ತಾನದ ರಾಜಧಾನಿಯಾಗಿ, ಸೈನ್ಯಪಡೆಯ ಕೇಂದ್ರವಾಗಿ ಅಭಿವೃದ್ಧಿಹೊಂದಿದ ನಗರವೆನಿಸಿತು. 

ರಾವಲ್ಪಿಂಡಿ ವಿಭಾಗ ಸು. 29024 ಚ ಕಿಮೀ ವಿಸ್ತೀರ್ಣದಲ್ಲಿದೆ. ಝೀಲಂ, ಗುಜರಾತ್, ರಾವಲ್ಪಿಂಡಿ ಮತ್ತು ಕಂಬಲ್‍ಪೊರೆ ಜಿಲ್ಲೆಗಳು ಈ ವಿಭಾಗಕ್ಕೆ ಸೇರಿವೆ. ಜನಸಂಖ್ಯೆ ಸು. 5689,000 (1972).

ರಾವಲ್ಪಿಂಡಿ ಜಿಲ್ಲೆಯ ವಿಸ್ತೀರ್ಣ ಸು. 5237 ಚಕಿಮೀ. ಜನಸಂಖ್ಯೆ 17,51,000 (1972).  ಜಿಲ್ಲೆಯ ಈಶಾನ್ಯದಲ್ಲಿ ಮುರ್ರಿ ಬೆಟ್ಟಗಳು ಒಳಚಾಚಿಕೊಂಡಿದ್ದು ದಕ್ಷಿಣದವರೆಗೆ ಹಬ್ಬಿವೆ. ಪೂರ್ವದಲ್ಲಿ ಕಹೂಟ ಬೆಟ್ಟಗಳು ಜಿಲ್ಲೆಯ ಎಲ್ಲೆಯಂತಿವೆ. ಈ ಬೆಟ್ಟಗಳಲ್ಲಿ  ದಟ್ಟಕಾಡುಗಳಿವೆ. ಮಳೆಗಾಲದಲ್ಲಿ ತುಂಬು ಹರಿಯುವ ಅನೇಕ ಸಣ್ಣ ನದಿಗಳಿವೆ.  ಜಿಲ್ಲೆಯ ಉತ್ತರದಲ್ಲಿ ಸೊಯನ್ ನದಿಯೂ ಈ ದಕ್ಷಿಣದಲ್ಲಿ ಖಾನ್ಸಿ ನದಿಯೂ ಹರಿಯುತ್ತಿದ್ದು ನೀರಾವರಿಗೆ ಉಪಯುಕ್ತವೆನಿಸಿವೆ.  ಜಿಲ್ಲೆಯ ಪೂರ್ವದಲ್ಲಿ  ಝೀಲಂ ನದಿ ಆಳವಾದ ಕಣಿವೆಯಲ್ಲಿ ಹರಿಯುವುದರಿಂದ ವ್ಯವಸಾಯಕ್ಕೆ  ಉಪಯೋಗವಾಗುವುದಿಲ್ಲ. ಇಲ್ಲಿನ ವ್ಯವಸಾಯಕ್ಕೆ ಹೆಚ್ಚಾಗಿ ಮಳೆಯನ್ನು ಅವಲಂಬಿಸಿದೆ. ಗೋದಿ, ಬಾರ್ಲಿ, ವಿವಿಧ ಕಾಳುಗಳು ಇಲ್ಲಿಯ ಮುಖ್ಯ ಬೆಳೆಗಳು. ಕುರಂಗ್ ನದಿಗೆ 1961-62ರಲ್ಲಿ ಕಟ್ಟಿದ  ರಾವಲ್ ಕಟ್ಟೆ ಸು. 4000  ಹೆಕ್ಟೇರಿಗೆ ನೀರೊದಗಿಸುತ್ತದೆ.  ಜೊತೆಗೆ ರಾವಲ್ಪಿಂಡಿ ಮತ್ತು ಇಸ್ಲಾಮಬಾದ್ ನಗರಗಳಿಗೆ ಇಲ್ಲಿಂದಲೇ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.  ಈ ಜಿಲ್ಲೆ ಹಿಂದೆ ಗಾಂಧಾರದ ಒಂದು ಭಾಗವಾಗಿತ್ತೆನ್ನಲಾಗಿದೆ. ರಾವಲ್ಪಿಂಡಿಯ ವಾಯುವ್ಯದಲ್ಲಿ  ಷಹದೇರಿ ಬಳಿ ಹಿಂದಿನ ತಕ್ಷಶಿಲೆ ನಗರದ ಅವಶೇಷಗಳು ದೊರಕಿವೆ. ರಾವಲ್ಪಿಂಡಿಯ ದಕ್ಷಿಣದಲ್ಲಿ ಮಾಂಕಿಯಾಲ್ ಎಂಬಲ್ಲಿ 3ನೆಯ ಶತಮಾನದ ಬುದ್ಧಸ್ತೂಪ ಮುಂತಾದವು  ಇರುವುದನ್ನು ಗುರುತಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ